Pages

Friday, December 6, 2013

ದ್ಯಾವ್ರೆ:



ಕೆಲವು ಚಿತ್ರಗಳನ್ನು ನೋಡಿದಾಕ್ಷಣ ಹೊರಬಂದು ಒಂದಷ್ಟು ಜನರಿಗೆ ಅದರ ಬಗ್ಗೆ ಹೇಳಬೇಕು ಎನಿಸುತ್ತದೆ. ಮತ್ತೆ  ಕೆಲವು ಚಿತ್ರಗಳು ನೋಡಿದಾಗ ಖುಷಿಯಾಗದಿದ್ದರೂ ಬೇಸರವಂತೂ ಆಗುವುದಿಲ್ಲ. ಇನ್ನು ಕೆಲವು ಯಾಕಾದರೂ ಬಂದೆವಪ್ಪೋ ಎಂದು ತಲೆ ತಲೆ ಚಚ್ಚಿಕೊಳ್ಳುವಂತೆ ಮಾಡುತ್ತದೆ. ದ್ಯಾವ್ರೆ ಚಿತ್ರ ಎರಡನೆಯ ವಿಭಾಗಕ್ಕೆ ಸೇರುತ್ತದೆ ಎನ್ನಬಹುದು.
ಗಟ್ಟಿ ಕಥೆಯ ಸಿನೆಮಾ ಮಾಡಿರುವುದು ಈ ಗಡ್ಡ ವಿಜಿ ಎನ್ನಬಹುದು. ಒಂದು ಬಂಧೀಖಾನೆ ಮತ್ತು ಅದರಲ್ಲಿನ ಖೈದಿಗಳ ಜೀವನದ ಜೊತೆಗೆ ಸದಾ ಬಂಧಿಗಳಾಗಿರುವ ಜೈಲಿನ ಅಧಿಕಾರಿಗಳ ಕಥೆಯನ್ನು ಗಡ್ಡ ವಿಜಿ ಸಾಕಷ್ಟು ಸೂಕ್ಷ್ಮ ಸಂವೇದನೆಯಿಂದ ತೆರೆಯ ಮೇಲೆ ತಂದಿದ್ದಾರೆ. ಸರಳವಾದ ತಮಾಷೆಯ ದೃಶ್ಯದಿಂದ ಪ್ರಾರಂಭವಾಗುವ ದ್ಯಾವ್ರೆ ಗಂಭೀರವಾಗಿ ಮುಗಿಯುತ್ತದೆ.ಜೈಲು, ಅಲ್ಲೊಬ್ಬ ಮಾನವೀಯತೆಯ ಪ್ರತಿರೂಪದಂತಿರುವ ಜೈಲರ್ , ಅಲ್ಲಿಗೆ ಸಂದರ್ಶನಕ್ಕೆ ಬರುವ ವರದಿಗಾರ್ತಿ ಮತ್ತು ಒಂದಷ್ಟು ಜನ ಖೈದಿಗಳು ಒಂದೆಡೆಯಾದರೆ, ಒಬ್ಬ ಭ್ರಷ್ಟ ರಾಜಕಾರಣಿ, ಒಬ್ಬ ಕಟುಕ ಪೋಲಿಸ್ ಅಧಿಕಾರಿ ಮತ್ತು ಒಬ್ಬ ಸಮಯ ಸಾಧಕಿ ಚಿತ್ರನಟಿ ಇನ್ನೊಂದೆಡೆ..ಇವರಿಬ್ಬರ ಆಟವನ್ನು ಸುಮ್ಮನೆ ನೋಡುವ ಸಮಾಜ ಇನ್ನೊಂದೆಡೆ ..ಇಷ್ಟನ್ನೂ ಒಂದೇ ಚೌಕಟ್ಟಿನಲ್ಲಿ ಹಿಡಿದಿಡುವ ಗಡ್ಡ ವಿಜಿಯ ಪ್ರಯತ್ನಕ್ಕೆ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ.
ಇದರ ಜೊತೆ ಜೈಲಿನ ಪ್ರಮುಖ ಖೈದಿಗಳ ಹಿನ್ನೆಲೆಯಲಿ ಮೂಡಿಬರುವ ಉಪಕಥೆಗಳೂ ಸಶಕ್ತವಾಗಿರುವುದು ಚಿತ್ರಕ್ಕೆ ಇನ್ನಷ್ಟು ಬಲ ಕೊಟ್ಟಿದೆ.
ಆದರೆ ಚಿತ್ರದ ಚಿತ್ರಕತೆ ಮಧ್ಯಂತರದ ನಂತರ ಒಂದಷ್ಟು ಹಳಿ ತಪ್ಪಿದಂತೆ ಕಾಣುತ್ತದೆ. ಯೋಗರಾಜ್ ಭಟ್ಟರ ಮಾತುಗಳು ಅಲ್ಲಲ್ಲಿ ರಂಗಾಯಣ ರಘು ಮಾತಿನಂತೆ ಕೇಳಿಸಿದರೆ ಅದಕ್ಕೆ ಯಾರು ಹೊಣೆ ಎಂಬುದನ್ನು ಭಟ್ಟರೇ ಹೇಳಬೇಕು. ಚಿತ್ರದ ಶಕ್ತಿ ಅರ್ಥಗರ್ಭಿತವಾದ ಸಂಭಾಷಣೆ. ಹಾಗೆಯೇ ಚಿತ್ರದಲ್ಲಿನ ಋಣಾತ್ಮಕ ಅಂಶವೂ ಅದೇ ಎನ್ನಬಹುದು.ಚಿತ್ರದಲ್ಲಿನ ಎಲ್ಲಾ ಪಾತ್ರಗಳೂ ಒಂದೇ ರೀತಿಯಾಗಿ ಮಾತನಾಡುವುದು ಅಲ್ಲಲ್ಲಿ ಕಿರಿಕಿರಿ ಎನಿಸದೇ ಇರದು. ಹಾಗೆಯೇ ಪಾತ್ರ ಪೋಷಣೆಯೂ ಅಲ್ಲಲ್ಲಿ ಹೊಸದು ಎನಿಸಿದರೂ ಕೆಲವು ಕಡೆ ವಿಚಿತ್ರ ಎನಿಸುತ್ತದೆ.
ಇದೆಲ್ಲವನ್ನೂ ಪಕ್ಕಕ್ಕಿರಿಸಿದಾಗ ದ್ಯಾವ್ರೆ ಒಂದು ಬಂಧಿಖಾನೆ ಕುರಿತಾದ ಉತ್ತಮ ಚಿತ್ರ ಎನ್ನಬಹುದು.ಚಿತ್ರದಲ್ಲಿ ತಮಾಷೆ, ಹಾಸ್ಯಕ್ಕೆ ಅಷ್ಟು ಗಮನ ಕೊಡದಿದ್ದರೂ ಅಲ್ಲಲ್ಲಿ ಒಂದಷ್ಟು ನಗು ತರಿಸುವ ಮಾತುಗಳಿವೆ.
ಭಟ್ಟರು ಚಿತ್ರದ ಮುಖ್ಯ ಪಾತ್ರವಾದ ಜೈಲರ್ ಭೀಮಸೇನಾ ಆಗಿ ಅಭಿನಯಿಸಿದ್ದಾರೆ. ತಾವೇ ಬರೆದ ಉಡಾಫೆಯಂತಹ ಉದ್ದುದ್ದದ್ದ ಮಾತುಗಳನ್ನು ಆದಿ ಖುಷಿ ಕೊಡುತ್ತಾರೆ. ಒಬ್ಬ ನಟನಾಗಿ ಅವರಿಗೆ ಫುಲ್ ಮಾರ್ಕ್ಸ್ ಕೊಡಬಹುದು. ಕಟುಕ ಪೋಲಿಸ್ ಅಧಿಕಾರಿಯಾಗಿ ಸರ್ದಾರ್ ಸತ್ಯ ಹುಚ್ಚನಂತೆ ಆಡಿದ್ದಾರೆ. ಕಾಡಿನವನಾಗಿ ವಿಚಿತ್ರ ಮಾತನಾಡುವ ಸತೀಶ್ ನೀನಾಸಂ ಪಾತ್ರವಿಲ್ಲಿ ಚಿಕ್ಕದು. ಉಳಿದಂತೆ ರಾಜೇಶ್ ಕುಟುಂಬದ ಕಥನ ಕಣ್ಣೀರು ತರಿಸುತ್ತದೆ.
ಚಿತ್ರದ ಬಹುಪಾಲು ಜೈಲಿನಲ್ಲೇ ನಡೆಯುತ್ತದೆ. ಅದಷ್ಟನ್ನು ಛಾಯಾಗ್ರಾಹಕ ಗುರುಪ್ರಶಾಂತ್ ರೈ ಚೆನ್ನಾಗಿ ತೆರೆಯ ಮೇಲೆ ಕಾಣಿಸಿದ್ದಾರೆ.ಸಂಗೀತ ನಿರ್ದೇಶಕ ವೀರ ಸಮರ್ಥ ಹಾಡಿನ ಸಂಗೀತ ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಧಂ ಇದ್ದರೆ ಚೆನ್ನಾಗಿತ್ತೇನೋ ಎನಿಸುತ್ತದೆ.
ಅದೇ ಲಾಂಗು ಮಚ್ಚು ಪ್ರೇಮಕಥೆಗಳ ನಡುವೆ ಒಂದೇ ಬೇರೆಯದೇ ಆದ ಚಿತ್ರವಾಗಿ ದ್ಯಾವ್ರೆ ನಿಲ್ಲುತ್ತದೆ. ಹೆಚ್ಚು ನಿರೀಕ್ಷಿಸದೆ ಚಿತ್ರ ಮಂದಿರ ಹೊಕ್ಕರೆ ನಿರಾಸೆಯಾಗುವುದಿಲ್ಲ. ಮನರಂಜನೆ, ಮಜಾಕ್ಕಿಂತ ಕಥೆಯಿಂದಾಗಿ ದ್ಯಾವ್ರೆ ಚಿತ್ರ ಆಸಕ್ತಿಕರ ಎನಿಸಿಕೊಳ್ಳುತ್ತದೆ.
[ ಇದೇ ರೀತಿಯ ಕಥೆಯನ್ನು ಹೊಂದಿರುಬ ಬ್ರೆಜಿಲ್ ಚಿತ್ರ ಕೆರಂಡಿರು ಒಂದು ನೋಡಲೇ ಬೇಕಾದ ಚಿತ್ರ. ಅದರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

No comments:

Post a Comment