Pages

Friday, March 28, 2014

ಉಳಿದವರು ಕಂಡಂತೆ:

ಟ್ರೈಲರ್ ಅವಧಿ ನಾಲ್ಕೂವರೆ ನಿಮಿಷಗಳು. ಅದರಲ್ಲಿ ಫುಲ್ ಮಾರ್ಕ್ಸ್ ತೆಗೆದುಕೊಂಡಿದ್ದ ರಕ್ಷಿತ್ ಶೆಟ್ಟಿ ಎರಡೂವರೆ ಗಂಟೆಗಳ ವಿಸ್ತೃತ ಕತೆಯನ್ನು ಹೇಳುವಲ್ಲಿ ಎಷ್ಟರ ಮಟ್ಟಿಗೆ ಗೆದ್ದಿದ್ದಾರೆ ಎಂಬುದು ಪ್ರಶ್ನೆ.
ಒಂದೇ ಘಟನೆ.ಅದರ ಆಯಾಮಗಳು ಹಲವು. ಇದು ನಾನ್ ಲೀನಿಯರ್ ಚಿತ್ರಕತೆಗೆ ಹೇಳಿ ಮಾಡಿಸಿದಂತಹ ಕಥಾವಸ್ತು. ಇದರ ಆಧಾರವಾಗಿ ಜಗತ್ತಿನಲ್ಲಿ ಹಲವಾರು ಚಿತ್ರಗಳು ಬಂದಿವೆ ಮತ್ತು ಯಶಸ್ವಿಯಾಗಿವೆ. ಕನ್ನಡದಲ್ಲಿ ಆ ತರಹದ ಒಂದು ಪ್ರಯತ್ನ ಮಾಡಲು ಹೋಗಿದ್ದಾರೆ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ. ಒಬ್ಬ ನಿರ್ದೇಶಕರಾಗಿ, ಒಬ್ಬ ನಟನಾಗಿ ಗಮನ ಸೆಳೆಯುವ ರಕ್ಷಿತ್ ಒಬ್ಬ ಕತೆ ಚಿತ್ರಕತೆಗಾರನಾಗಿ ಸೋಲುತ್ತಾರೆ. ಒಂದು ಘಟನೆಯನ್ನು ನಾಲ್ಕು ಆಯಾಮಗಳಲ್ಲಿ ಹೇಳಲು ಹೋಗಿ ಗೊಂದಲಕ್ಕೆ ಬೀಳುತ್ತಾರೆ. ಒಂದು ಸಮಯದಲ್ಲಿ ಅತ್ಯುತ್ತಮವಾದ ಹಿನ್ನೆಲೆ ಸಂಗೀತ, ಅಚ್ಚುಕಟ್ಟಾದ ಛಾಯಾಗ್ರಹಣ ಕೂಡ ಚಿತ್ರವನ್ನು ನೋಡಲು ಆಗದಂತೆ ಮಾಡಿಬಿಡುತ್ತದೆ ಎಂದರೆ ಅದಕ್ಕೆ ಕಾರಣ ಪೇಲವ ಚಿತ್ರಕತೆ ಮತ್ತು ಕುತೂಹಲ ಹುಟ್ಟಿಸದ ಕತೆ ಎನ್ನಬಹುದು.
ಚಿತ್ರದ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಅತಿ ವೇಗವಾಗಿ ಮಾತನಾಡುವ ಪಾತ್ರಗಳು ಮತ್ತು ಶೈಲಿಯನ್ನು ಅರ್ಥೈಸಿಕೊಳ್ಳಲು ಕಷ್ಟ ಪಡಬೇಕು ಪ್ರೇಕ್ಷಕ. ಹಾಗೂ ಹೀಗೂ ಕಷ್ಟ ಪಟ್ಟು ತನ್ಮಯನಾಗಲು ಪ್ರಯತ್ನಿಸಿದರೆ ಚಿತ್ರ ಸಾದಾರಣ ಮಟ್ಟಕ್ಕಿಂತ ಮೇಲೆ ಬರದೆ ಸತಾಯಿಸುತ್ತದೆ.
ಚಿತ್ರದ ಸ್ಥಳಗಳು, ಅದನ್ನು ಚಿತ್ರೀಕರಿಸಿರುವ ಶೈಲಿ, ಕತೆಗಳನ್ನು ವಿಂಗಡಿಸಿರುವ ರೀತಿ, ಗ್ರಾಫಿಕ್ ಬಳಕೆ ಎಲ್ಲವೂ ಪರಿಣಾಮಕಾರಿ. ಮತ್ತವುಗಳನ್ನು ಅವುಗಳಲ್ಲಿನ ಸೂಕ್ಷ್ಮವಾದ ಅಂಶಗಳನ್ನು ಕುಸುರಿ ಕೆತ್ತಿರುವ ಚಿತ್ರತಂಡದ ಕಸುಬುದಾರಿಕೆಗೆ ಶಹಬ್ಬಾಸ್ ಹೇಳಲೇಬೇಕಾಗುತ್ತದೆ. ಯಾಕೆಂದರೆ ನೆರಳು ಬೆಳಕಿನಾಟ, ಮಳೆಯಲ್ಲಿನ ದೃಶ್ಯಗಳು ಮತ್ತು ಅಂದಿಕೊಂಡಿರುವ ದೃಶ್ಯಗಳ ಚಿತ್ರಣ ಸೊಗಸಾಗಿದೆ. ಎಲ್ಲವೂ ಸರಿ. ಆದರೆ ಅದನ್ನು ನೋಡುವುದು ಅಸಾಧ್ಯ ಎನಿಸದೆ ಇರದು.
ನಾಯಕನಾಗಿ ರಕ್ಷಿತ್ ಶೆಟ್ಟಿ ಚೆನ್ನಾಗಿ ಅಭಿನಯಿಸಿದ್ದಾರಾದರೂ ಅವರ ಪಾತ್ರ ಅಷ್ಟಾಗಿ[ಟ್ರೈಲರ್ ನಲ್ಲಿ ಮಜಕೊಟ್ಟಷ್ಟು] ಮಜಾ ಕೊಡುವುದಿಲ್ಲ. ಉಳಿದ ತಾರಾಗಣದಲ್ಲಿ ಕಿಶೋರ್ ಹಾಗೆ ಬಂದು ಹೋಗಿ ಬಿಡುತ್ತಾರೆ. ಇನ್ನುಳಿದಂತೆ ಅಚ್ಯುತರಾವ್, ತಾರಾ ರಿಶಬ್ ಶೆಟ್ಟಿ ಮುಂತಾದವರ ಪಾತ್ರಗಳು ಚೆನ್ನಾಗಿವೆಯಾದರೂ ಕತೆಗೆ ಹಾಸುಹೊಕ್ಕಾಗದೆ ಇರುವುದರಿಂದ ಎಲ್ಲವೂ ಅರ್ಧ ಎನಿಸಿ ಪರಿಪೂರ್ಣತೆ ಎನಿಸುವುದಿಲ್ಲ.
ನಿರ್ದೇಶಕ ರಕ್ಷಿತ್ ಶೆಟ್ಟಿ ಅಂದುಕೊಂಡದ್ದನ್ನು ಯಾವುದೇ ರಾಜಿಯಿಲ್ಲದೇ ಅಚ್ಚುಕಟ್ಟಾಗಿ ಮಾಡಿದ್ದಾರೆ.ಆದರೆ ಆ ಅಂದುಕೊಂಡದ್ದು ಪರಿಣಾಮಕಾರಿಯಾಗದೆ ಇರುವುದು ಚಿತ್ರದ ದೊಡ್ಡ ಋಣಾತ್ಮಕ ಅಂಶ. ಒಂದು ಘಟನೆ ಪ್ರತಿ ಸಾರಿ ಪುನರಾವರ್ತನೆಯಾಗುತ್ತದೆ ಮತ್ತು ಅದು ಬೇರೆ ಬೇರೆಯವರ ದೃಷ್ಟಿಯಲ್ಲಿ ನಿರೂಪಿತವಾಗುತ್ತದೆ ಎಂದಾಗ ಆ ಘಟನೆ ಅಷ್ಟೇ ಕುತೂಹಲಕಾರಿ ಮತ್ತು ನಿಗೂಢಕಾರಿಯಾಗಿರಬೇಕಿತ್ತು. ಹಾಗೆಯೇ ಅದು ಬೇರೆ ಬೇರೆಯವರ ದೃಷ್ಟಿಯಲ್ಲಿ ಹೊಸ ಹೊಸ ಮಜಲನ್ನು ಪಡೆದುಕೊಳ್ಳುತ್ತಾ ಸಾಗಬೇಕಾಗಿತ್ತು. ಇಲ್ಲಿ ಅದ್ಯಾವುದೂ ಆಗದೆ ಇರುವುದು ಆಕಳಿಕೆ ತರಿಸುತ್ತದೆ.
ಕತೆ ಚಿತ್ರಕತೆಯನ್ನು ಗಂಭೀರವಾಗಿ ತೆಗೆದುಕೊಂಡು ಸಶಕ್ತಗೊಳಿಸಿದರೆ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರಗಳ ಮೇಲೆ ನಿರೀಕ್ಷೆ ಇಡಬಹುದು.

1 comment:

  1. ಚಿತ್ರ ನನಗೆ ಇಷ್ಟ ಆಯಿತು. ಪೆಪರ್ ಹಾಡಿನ ಜಾಗ ತಪ್ಪು. ಕ್ಲೈಮಾಕ್ಸ್ ಹತ್ತಿರ ಹಾಕಬಾರದಿತ್ತು. ನಮ್ಮ ಊರನ್ನು ಊರಿನ೦ತೆಯೇ ತೋರಿಸಿದ್ದಾರೆ. ಎಲ್ಲೂ ಹೀರೋಯಿಸ೦ ಇಲ್ಲ. ಮಾಮೂಲಿ ದಿನ ಜನ ಜೀವನ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನೊಸ್ಟಲ್ಜಿಯ ಟ್ರಿಪ್ ಆದ೦ತೆ. ಹೌಸ್ ಫುಲ್ ಥಿಯೇಟರ್ ನೋಡಿ ಖುಶಿಯಾಯಿತು. ಸಿನೆಮಾ ಮುಗಿಸಿದ ಮೇಲೂ ಜನರ ಮುಖದಲ್ಲಿ ನೋಡಿದ ಅನುಭವದ ಮ೦ದಹಾಸ ಇತ್ತು. ನನ್ನ ಪ್ರಕಾರ ನಿರ್ದೇಶನ ವರ್ಕ್ ಆಗಿದೆ. ಅಲ್ವ ಸ್ವಲ್ಪ ಎಡವು ಬಿಟ್ಟರೆ ಒಳ್ಳೆಯ ಸಿನೆಮಾ. ಮಾಮೂಲ್ ಮೈನ್ ಸ್ಟ್ರೀಮ್ ಲವ್-ರೌಡಿಸ೦-ಬೆ೦ಗಳೂರೆ೦ದೇ ಕರ್ನಾಟಕದಲ್ಲಿರೋ ಊರು ಕಥೆಗಳಿಗಿ೦ತ ಕೊಚ್ಚೆಗಿ೦ತ ಎಷ್ಟೋ ವಾಸಿ. 4/5. ಎಡಿಟಿ೦ಗ್ ಕೊನೆಗೆ ಎಡವಿದೆ. ಜರ್ನಾಲಿಸ್ಟ್ ನ ಕ೦ಫ್ಯೂಶನ್ ಅಲ್ಲಿನ ಎಲ್ಲಾ ಕ್ಯಾರಕ್ಟ್ರರ್ ಗಳ ಕ೦ಫ್ಯೂಶನ್ ಹೌದು. ಆದರೆ ರಿಚಿಯ ಜೈಲಿನಲ್ಲಿರುವ ಗೆಳೆಯನಿಗೆ ಕ್ಲಿಯರ್ ಐಡಿಯ ಇದೆ, ಅದಕ್ಕೆ ಸುಳ್ಳು ಹೇಳುತ್ತಾನೆ. ನೋಡುಗರಿಗೂ ಕಥೆ ಸ್ಪಷ್ಟವಾಗಿದೆ

    ReplyDelete